ಲೋಕಸಭೆಯಲ್ಲಿ ಭಾಷಣಕ್ಕೆ ಅಡ್ಡಿ: ಸ್ಪೀಕರ್ ಓಂ ಬಿರ್ಲಾರಿಗೆ ಪತ್ರ ಬರೆದು ಪ್ರತಿಭಟಿಸಿದ ರಾಹುಲ್ ಗಾಂಧಿ: ಪತ್ರದಲ್ಲೇನಿದೆ? | Rahul Gandhi

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
Published on

ಪ್ರಮುಖ ಮುಖ್ಯಾಂಶಗಳು

  • ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲೆ ರಾಹುಲ್ ಗಾಂಧಿ ಮಾತು
  • 2020ರ ಲಡಾಖ್​ನಲ್ಲಿ ನಡೆದ ಭಾರತ ಮತ್ತು ಚೀನಾ ಘರ್ಷಣೆ ಬಗ್ಗೆ ಉಲ್ಲೇಖ
  • ಮಾಜಿ ಸೇನಾ ಮುಖ್ಯಸ್ಥ ಎಂ.ಎಂ.ನರಾವಣೆ ಅವರ ಅಪ್ರಕಟಿತ ಪುಸ್ತಕ ಉಲ್ಲೇಖ
  • ಅಪ್ರಕಟಿತ ಪುಸ್ತಕದ ಆಯ್ದ ಮಾಹಿತಿ ಉಲ್ಲೇಖಿಸದಂತೆ ಬಿಜೆಪಿ ಸದಸ್ಯರಿಂದ ಅಡ್ಡಿ
ನವದೆಹಲಿ: ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆ ಕುರಿತು ಲೋಕಸಭೆಯಲ್ಲಿ ಮಾತನಾಡಲು ಅಡ್ಡಿಪಡಿಸಿದ ಮತ್ತು ಮಾತನಾಡಲು ಅವಕಾಶ ನೀಡದಿದ್ದಕ್ಕೆ ಮಂಗಳವಾರ(ಫೆ. 03) ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi), ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ತೀವ್ರ ಪ್ರತಿಭಟನೆ ದಾಖಲಿಸಿದ್ದಾರೆ.
ಸ್ಪೀಕರ್ ಓಂ ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶ ನೀಡದಿರುವುದು, ಸಂಪ್ರದಾಯದ ಉಲ್ಲಂಘನೆ ಮಾತ್ರವಲ್ಲದೇ, ಉದ್ದೇಶಪೂರ್ವಕವಾಗಿ ತಡೆಯುವ ಪ್ರಯತ್ನ. ಇದು ನಮ್ಮ ಪ್ರಜಾಪ್ರಭುತ್ವದ ಮೇಲಿನ ಕಪ್ಪು ಚುಕ್ಕೆ ಎಂದು ಬಣ್ಣಿಸಿದ್ದಾರೆ. 
ಲೋಕಸಭೆಯಲ್ಲಿ ಸೋಮವಾರ ಮತ್ತು ಮಂಗಳವಾರ 2020 ಜೂನ್​ನಲ್ಲಿ ಲಡಾಖ್​ನಲ್ಲಿ ನಡೆದ ಭಾರತ ಮತ್ತು ಚೀನಾ ನಡುವಿನ ಘರ್ಷಣೆಗೆ ಸಂಬಂಧಿಸಿದಂತೆ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರಾವಣೆ ಅವರ ಅಪ್ರಕಟಿತ ಪುಸ್ತಕದ ಆಯ್ದ ಭಾಗವನ್ನು ರಾಹುಲ್ ಗಾಂಧಿ ಉಲ್ಲೇಖಿಸಲು ಪ್ರಯತ್ನಿಸಿದಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ಅನೇಕ ಬಿಜೆಪಿ ಸಚಿವರು ಆಕ್ಷೇಪಿಸಿದರು. ಸದನದ ನಿಯಮದ ಪ್ರಕಾರ ಅಪ್ರಕಟಿತವಾದ ಪುಸ್ತಕವನ್ನು ಉಲ್ಲೇಖಿಸಲಾಗಲ್ಲ ಎಂದಿದ್ದರು. 
ಈ ಕುರಿತು ಪತ್ರದಲ್ಲಿ ಉಲ್ಲೇಖಿಸಿರುವ ರಾಹುಲ್ ಗಾಂಧಿ, ಭಾರತ-ಚೀನಾ ಘರ್ಷಣೆಯ ಸಮಯದಲ್ಲಿ ನರಾವಣೆಯವರು ಸೇನಾ ಮುಖ್ಯಸ್ಥರಾಗಿದ್ದರು. ಸದನದ ದೀರ್ಘಕಾಲದ ಸಂಪ್ರದಾಯದ ಪ್ರಕಾರ, ಸದನದಲ್ಲಿ ದಾಖಲೆಯನ್ನು ಉಲ್ಲೇಖಿಸಲು ಬಯಸುವ ಸದಸ್ಯರು ಅದನ್ನು ದೃಢೀಕರಿಸಬೇಕು. ಮತ್ತು ಅದರ ಜವಾಬ್ದಾರಿಯನ್ನು ದೃಢೀಕರಿಸಬೇಕು. ಈ ಅವಶ್ಯಕತೆಯನ್ನು ಪೂರೈಸಿದ ಬಳಿಕ ಸ್ಪೀಕರ್ ಸದಸ್ಯರಿಗೆ ದಾಖಲೆಯನ್ನು ಉಲ್ಲೇಖಿಸಲು ಅವಕಾಶ ನೀಡಬೇಕು. ಬಳಿಕ ಅದಕ್ಕೆ ಪ್ರತಿಕ್ರಿಯಿಸುವುದು ಸರ್ಕಾರದ ಜವಾಬ್ದಾರಿ. ಅಲ್ಲಿಗೆ ಸ್ಪೀಕರ್ ಪಾತ್ರವು ಮುಗಿಯುತ್ತದೆ ಎಂದು ಉಲ್ಲೇಖಿಸಿದ್ದಾರೆ.
ಸೋಮವಾರ, ರಾಷ್ಟ್ರಪತಿಗಳ ಭಾಷಣದ ಮೇಲಿನ ನಿಲುವಳಿಯನ್ನು ಮಂಡಿಸುವಾಗ, ನಾನು ಉಲ್ಲೇಖಿಸಲು ಉದ್ದೇಶಿಸಿದ್ದ ಮ್ಯಾಗ್​ಜಿನ್ ಅನ್ನು ನನಗೆ ದೃಢೀಕರಿಸಲು ನಿರ್ದೇಶಿಸಿದ್ದೀರಿ. ಇಂದು ನನ್ನ ಭಾಷಣವನ್ನು ಆರಂಭಿಸುವಾಗ ನಾನು ದಾಖಲೆಯನ್ನು ದೃಢೀಕರಿಸಿದ್ದೇನೆ. ಆದರೂ ಇಂದು ನಾನು ಮಾತನಾಡುವಾಗ ಮತ್ತೆ ಅಡ್ಡಿಪಡಿಸಲಾಯಿತು.
ಸಂಸತ್​ನಲ್ಲಿ ವಿರೋಧ ಪಕ್ಷದ ಸದಸ್ಯರು ಸೇರಿ ಪ್ರತಿಯೊಬ್ಬರು ಸಂಸದರು ಮಾತನಾಡುವ ಹಕ್ಕು ನಮ್ಮ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ. ಆದರೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ಪೀಕರ್ ಮೂಲಕ ಸರ್ಕಾರ, ಪ್ರತಿಪಕ್ಷದ ಸದಸ್ಯರು ರಾಷ್ಟ್ರಪತಿಗಳ ಭಾಷಣದ ಮೇಲೆ ಮಾತನಾಡದಂತೆ ಒತ್ತಾಯಿಸಲಾಗುತ್ತಿದೆ. ಇದು ನಮ್ಮ ಪ್ರಜಾಪ್ರಭುತ್ವದ ಮೇಲಿನ ಕಪ್ಪು ಚುಕ್ಕೆ. ಇದರ ವಿರುದ್ಧ ನನ್ನ ಬಲವಾದ ಪ್ರತಿಭಟನೆ ಇದೆ ಎಂದು ರಾಹುಲ್ ಗಾಂಧಿ ಬರೆದಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net